ಕೂಲಂಬ್, ಚಾಲ್ರ್ಸ್ ಅಗಸ್ಟಿನ್ ಡಿ
1736 - 1806. ಫ್ರೆಂಚ್ ಭೌತವಿಜ್ಞಾನಿ ವಿದ್ಯುದ್ವಿಜ್ಞಾನದಲ್ಲಿ ಆದಿ ಪರಿಶೋಧಕ.  1736ರ ಜೂನ್ 14ರಂದು ಅಂಗೋಲೆಮೆ ಎಂಬಲ್ಲಿ ಜನಿಸಿದ. ಫ್ರೆಂಚ್ ಸೇನೆಯಲ್ಲಿ ಇಂಜಿನಿಯರಾಗಿ 9 ವರ್ಷ ವೆಸ್ಟ್ ಇಂಡೀಸಿನಲ್ಲಿ ಕೆಲಸ ಮಾಡಿದ. ಅಲ್ಲಿದ್ದಾಗಲೇ ಈತ ವಿಜ್ಞಾನಕ್ಕೆ ಸಂಬಂಧಪಟ್ಟ ಲೇಖನಗಳನ್ನು ಬರೆದಿದ್ದ. ಅಲ್ಲಿಂದ ಫ್ರಾನ್ಸಿಗೆ ಮರಳಿಬಂದಾಗ ಈತನ ಆರೋಗ್ಯ ಬಹಳ ಕುಗ್ಗಿತ್ತು.  1789ರಲ್ಲಿ ಫ್ರಾನ್ಸಿನಲ್ಲಿ ಕ್ರಾಂತಿ ತಲೆದೋರಿತು. ಆಗ ಈತ ಬ್ಲೋಯ್ ಪಟ್ಟಣದಲ್ಲಿದ್ದ ತನ್ನ ಚಿಕ್ಕ ತೋಟಕ್ಕೆ ಹೋಗಿ ಪೂರ್ಣ ಕಾಲವನ್ನು ವಿಜ್ಞಾನ ಸಂಶೋಧನೆಗೆ ಉಪಯೋಗಿಸಲಾರಂಭಿಸಿದ.  ತಿರುಚು ಮಾಪಕವನ್ನು ಇವನು ರಚಿಸಿದ್ದು 1777ರಲ್ಲಿ. ಇದೇ ಯಂತ್ರವನ್ನು ಮಿಚೆಲ್ ಎಂಬ ಇಂಗ್ಲೀಷ್ ಭೂವಿಜ್ಞಾನಿ ಆ ಮೊದಲೇ ಸ್ವತಂತ್ರವಾಗಿ ಕಂಡುಹಿಡಿದಿದ್ದ. ಇದರಲ್ಲಿ ಒಂದು ತೆಳುವಾದ ಮತ್ತು ಬಳುಕದ ತಂತು ಇದೆ. ತಂತುವಿನಲ್ಲಿ ಉಂಟಾಗುವ ತಿರುಚಿನಿಂದ ಬಲದ ಪರಿಮಾಣವನ್ನು ಅಳತೆಮಾಡಬಹುದು.  ಈ ಮಾಪಕದ ಪ್ರಯೋಗದಿಂದ ವಿದ್ಯುದ್ವಿಜ್ಞಾನದಲ್ಲಿ ಉಪಯೋಗಿಸುವ ಮುಖ್ಯವಾದ ಒಂದು ನಿಯಮವನ್ನು ಕೂಲಂಬ್ ಕಂಡುಹಿಡಿದ. (1785).  ಇದಕ್ಕೆ ಕೂಲಂಬನ ನಿಯಮ (ನೋಡಿ- ಕೂಲಂಬನ-ನಿಯಮ) ಎಂದೇ ಹೆಸರು ಬಂದಿದೆ.  ಇದರ ಪ್ರಕಾರ ವಿದ್ಯುತ್ತಿನ ಆಕರ್ಷಣೆಯ ಅಥವಾ ವಿಕರ್ಷಣೆಯ ಬಲ ಎರಡು ವಿದ್ಯುದಾವೇಷಗಳ(ಎಲೆಕ್ಟ್ರಿಕ್ ಚಾರ್ಜಸ್) ಗುಣಲಬ್ದದ ನೇರ ಅನುಪಾತದಲ್ಲಿಯೂ ಅವುಗಳ ದೂರದ ವರ್ಗದ ವ್ಯಾಸ್ಥಾನುಪಾತದಲ್ಲಿಯೂ ಇದೆ ಎಂದು ನಿರೂಪಿತವಾಗಿದೆ. ಈ ಕಾರಣದಿಂದ ಕೂಲಂಬ್ ಎನ್ನು ವಿದ್ಯುತ್ತಿನ ಏಕಮಾನವನ್ನು ಈತನ ಗೌರವಾರ್ಥವಾಗಿಯೇ ಇಡಲಾಗಿದೆ. ಇಷ್ಟಲ್ಲದೆ ಕೂಲಂಬ್ ಘರ್ಷಣೆ(1779). ಗಾಳಿಯಂತ್ರಗಳು (1781) ಮತ್ತು ಲೋಹ ಹಾಗೂ ರೇಷ್ಮೆ ಎಳೆಗಳ ತಿರುಚು ಸ್ಥಿತಿಸ್ಥಾಪಕತ್ವಗಳ(1784) ವಿಚಾರವಾಗಿ ಲೇಖನಗಳನ್ನು ಪ್ರಕಟಿಸಿದ್ದಾನೆ. ಈತ ಕಾಂತತ್ವವನ್ನು ಕುರಿತು ಕೂಡ ಸಂಶೋಧನೆಗಳನ್ನು ನಡೆಸಿ ಕಾಂತಬಲಮಾಪಕ ಮತ್ತು ಕಾಂತಬಲದರ್ಶಕಗಳನ್ನು ನಿರ್ಮಾಣ ಮಾಡಿದ್ದಾನೆ. 

ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಹೊಸ ಸರ್ಕಾರ ದಶಮಾನ ಅಳತೆ ಪದ್ಧತಿಯನ್ನು ಪರೀಕ್ಷಿಸಲು ರಚಿಸಿದ ಮಂಡಲಿಯಲ್ಲಿ ಈತನೂ ಒಬ್ಬ ಸದಸ್ಯನಾಗಿದ್ದ.  1802ರಲ್ಲಿ ಕೊಲಂಬನನ್ನು ಫ್ರಾನ್ಸ್ ದೇಶದ ಸಾರ್ವಜನಿಕ ಶಿಕ್ಷಣ ಕಾರ್ಯಕ್ಕೆ ಪರೀಕ್ಷಾಧಿಕಾರಿಯಾಗಿ ನೇಮಕ ಮಾಡಲಾಯಿತು.  ಕೊಲಂಬ್ ಗತಿಸಿದ್ದು 1806ರ ಆಗಸ್ಟ್ 23 ರಂದು ಪ್ಯಾರಿಸ್ ನಗರದಲ್ಲಿ.    

                                                   (ಎನ್.ಜಿ.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ